ಹುಡುಕಿ :   
ಯಕ್ಷಗಾನ
ಲೇಖನಗಳು
ಸ೦ದರ್ಶನಗಳು
ಸುದ್ದಿ ಜಾಲ
ಸುದ್ದಿ-ಸಮುಚ್ಛಯ
ಸ೦ಘಗಳು
ಪ್ರಸ೦ಗಗಳು
ಪುಸ್ತಕಗಳು
ಮೇಳಗಳು
ಹಾಡುಗಳು
ತಾಳಮದ್ದಲೆ
ದೃಶ್ಯಾವಳಿ
ವ್ಯಕ್ತಿ ವಿಶೇಷ
ಭಾಗವತರು
ಅರ್ಥಧಾರಿಗಳು
ಪುರುಷ ಪಾತ್ರಧಾರಿಗಳು
ಸ್ತ್ರೀ ಪಾತ್ರಧಾರಿಗಳು
ಹಿಮ್ಮೇಳ ವಾದಕರು
ಹಾಸ್ಯಗಾರರು
ತರಬೇತಿ
ನಮ್ಮ ಬಗ್ಗೆ ಮುಖಪುಟ
 
ಲೇಖನ
Share
ದಕ್ಷಯಜ್ಞ ಹೀಗೂ ಇದ್ದಲ್ಲಿ ಬದಲಾಗುವುದೇ ಸರಿಯಲ್ಲವೆ?

ಲೇಖಕರು : ಸುಬ್ರಹ್ಮಣ್ಯ ಬಿ. ಬಳಂತಿಮುಗರು
ಶನಿವಾರ, ಜೂನ್ 28 , 2014

ದಕ್ಷಯಜ್ಞದಲ್ಲಿ ಹೀಗೂ ಉಂಟೇ? ಎಂಬ ನನ್ನ ಅನಿಸಿಕೆಗೆ ಹೀಗೇ ಉಂಟು ಎಂಬ ಸಮರ್ಥನೆಯನ್ನು ಹಿರಿಯ ಕಲಾವಿದ ಸಿದ್ಧಕಟ್ಟೆ ವಿಶ್ವನಾಥ ಶೆಟ್ಟಿಯವರ ಕಳೆದ ವಾರದ ಲಲಿತರಂಗದಲ್ಲಿ ನೀಡಿದ್ದಾರೆ. ಲೇಖಕರು ತಮ್ಮ ಸಮರ್ಥನೆಯಲ್ಲಿ ಹಾಸ್ಯರಸದ ಬಗ್ಗೆ ಹಾಗೂ ಯಕ್ಷಗಾನದಲ್ಲಿ ಅದರ ಅಗತ್ಯ, ಕಥೆಗೆ ಪೂರಕವಾಗಿ ಅದರ ಬಳಕೆ, ಅದನ್ನು ಸ್ವೀಕರಿಸ ಬೇಕಾದ ಬಗೆ ಇತ್ಯಾದಿಗಳನ್ನು ತಿಳಿಸುತ್ತಾ, "ದಕ್ಷಯಜ್ಞ'ದಲ್ಲಿ ಸಾಲು ಸಾಲು ಬ್ರಾಹ್ಮಣರು ಯಾಗಕ್ಕೆ ಹೋಗುವುದು, ದಕ್ಷಿಣೆಗಾಗಿ ಲಕ್ಷ ಲಕ್ಷ ಧನದ ರಾಶಿಯ ಬಗ್ಗೆ ಪ್ರಸ್ತಾಪಿಸುವುದು ಇತ್ಯಾದಿ ಈ ಹಿಂದೆಯೂ ಇತ್ತು ಎಂದಿದ್ದಾರೆ. ನಾನು ಉಲ್ಲೇಖೀಸಿದ ದಕ್ಷಯಜ್ಞದಲ್ಲಿ ಬರೇ ಅಷ್ಟೇ ಇದ್ದಿದ್ದರೆ "ಹೀಗೂ ಉಂಟೇ?' ಎನ್ನುವ ಪ್ರಶ್ನೆಯೇ ಉದ್ಭವಿಸುತ್ತಿರಲಿಲ್ಲ.

ಸಾ೦ಧರ್ಭಿಕ ಚಿತ್ರ
ಯಾಕೆಂದರೆ ಈ ಹಿಂದೆ ಅಷ್ಟು ಹಾಸ್ಯವನ್ನು ತೆಂಕು-ಬಡಗು ಎರಡರಲ್ಲೂ ಅನುಭವಿಸಿದವನು ನಾನು. ಆದರೆ ಈ ಪ್ರದರ್ಶನದಲ್ಲಿ ಮುದುಕ ಬ್ರಾಹ್ಮಣನ ಹೆಂಡತಿಯೊಂದಿಗೆ ಇನ್ನೊಬ್ಬ ಬ್ರಾಹ್ಮಣನಿಗೆ ಅಕ್ರಮ ಸಂಬಂಧ ಇತ್ತು. ಅವನಿಂದ ಹುಟ್ಟಿದ ಮಗುವನ್ನು ಹೆಂಡತಿ ಕೈಯಲ್ಲಿ ಹಿಡಿದು "ಅಪ್ಪನನ್ನು ನೋಡು' ಎಂದು ಅವನತ್ತ ಹಿಡಿಯುತ್ತಿತ್ತು. ಅಲ್ಲಿ ದಕ್ಷಿಣೆಯ ಬಗ್ಗೆ ಹೆಚ್ಚು ಮಾತಿರದೆ ಇತರ ಅರ್ಥಹೀನ ಸಂಭಾಷಣೆಯೇ ಹೆಚ್ಚಾಗಿತ್ತು. ಬಳಿಕ, ಯಾಗಕ್ಕೆ ತೆರಳುವಾಗ ಮುದುಕನ ಹೆಂಡತಿಯ ಕೈ ಹಿಡಿದು ಮತ್ತೂಬ್ಬ ಬ್ರಾಹ್ಮಣ ಹಾಗೂ ಈತನ ತುಂಬು ಗರ್ಭಿಣಿ ಮಡದಿಯನ್ನು ಮುದುಕ ಕೈ ಹಿಡಿದು ಹೋಗುವ ಮೂಲಕ ಕ್ಲಬ್‌ ಸಂಸ್ಕೃತಿಯನ್ನೂ ಚಿತ್ರಿಸಲಾಯಿತು.

ಹಾಸ್ಯದ ಹೆಸರಿನಲ್ಲಿ ಪಾತ್ರವೊಂದನ್ನು ಅಷ್ಟು ಕೀಳುಮಟ್ಟಕ್ಕೆ ಇಳಿಸಿದ ಬಳಿಕ ದೇವರ ಮಡದಿ ದಾಕ್ಷಾಯಿಣಿ ಅವರಿಗೆಲ್ಲಾ ನಮಸ್ಕರಿಸುವುದು, ಅವರಿಂದ ಹರಸಲ್ಪಡುವುದು ಇತ್ಯಾದಿಗಳು ಅಲ್ಲಿ ಸೇರಿದ ನಮ್ಮೆಲ್ಲರ ಭಾವನೆ ಹಾಗೂ ನಂಬಿಕೆಗಳಿಗೆ ಘಾಸಿಯುಂಟು ಮಾಡಿತು. ಇದು ಖಂಡಿತಕ್ಕೂ ಸಲ್ಲ ಮಾತ್ರವಲ್ಲ, ಅಪರಾಧ. ಹಾಗಾಗಿಯೇ ಪ್ರಜಾ ಪ್ರಭುತ್ವದಲ್ಲಿ ವಾಕ್‌ ಸ್ವಾತಂತ್ರ್ಯ ಎಂಬುದು ವ್ಯಕ್ತಿ ಯೊಬ್ಬನ ಮೂಲಭೂತವಾದ ಹಕ್ಕೇ ಆಗಿದ್ದರೂ ಅದರಿಂದ ಇನ್ನೊಬ್ಬರ ನಂಬಿಕೆಗೆ ಧಕ್ಕೆಯಾಗುವುದಿದ್ದಲ್ಲಿ ಹಕ್ಕನ್ನು ಕಸಿಯಲು ಕಾನೂನಿನ ಅವಕಾಶ ಕೊಟ್ಟಿರುವುದು.

ಹಾಗಿದ್ದಲ್ಲಿ ಬ್ರಹ್ಮಕಪಾಲದಂತಹ ಪ್ರದರ್ಶನ ಹೇಗೆ ಎಂಬ ಪ್ರಶ್ನೆ ನಾಳೆ ಬೇಡ. ಅದು ಪುರಾಣದಲ್ಲಿ ಇರುವುದೇ, ಹಾಗಾಗಿ ಸ್ವೀಕೃತ. ಒಂದು ವೇಳೆ ಘಾಸಿ ಯಾಗುವುದೇ ಆಗಿದ್ದರೆ ಆತ ಪ್ರದರ್ಶನಕ್ಕೆ ಬರಲಾರ. ಈ ಹಿಂದೆ ನಾನು ನೋಡಿದ ಯಾವುದೇ ದಕ್ಷಯಜ್ಞ ದಲ್ಲಿ ಇಂಥದ್ದು ಕಂಡಿಲ್ಲ. ದಿ| ವಿಟ್ಲ ಜೋಶಿಯವರು ಇಷ್ಟು ಚಿತ್ರಣವನ್ನು ರಂಗದಲ್ಲಿ ಕೊಡುತ್ತಿದ್ದರೇ? ಒಂದು ವೇಳೆ ಹೌದೇ ಆಗಿದ್ದಲ್ಲಿ, ಹಲವು ಪರಂಪರೆಗಳನ್ನೇ ಬಿಟ್ಟಿರುವ ಈ ಕಾಲಕ್ಕೆ ಅದನ್ನೇ ಮುಂದುವರಿಸುವ ಅನಿವಾರ್ಯತೆ ಇದೆಯೆ? ಕೈಬಿಟ್ಟರೆ ಪರಂಪರೆಗೆ ಧಕ್ಕೆಯಾಗದು ತಾನೆ? ಮೇಲೆ ಹೇಳಿರುವ ಅಷ್ಟೂ ಪ್ರದರ್ಶನದ ಚಿತ್ರೀಕರಣದ ದಾಖಲೆ ನನ್ನ ಬಳಿ ಇರುವ ಕಾರಣದಿಂದಲೇ ನನ್ನ ಅನಿಸಿಕೆಗಳನ್ನು ಪತ್ರಿಕೆ ಹಾಗೂ ಸಾಮಾಜಿಕ ಜಾಲತಾಣಗಳಲ್ಲಿ ಹರಿಯಬಿಟ್ಟೆ. ರಂಗದಲ್ಲಿ ಹೆಸರು ಮಾಡಿರುವ ಹಿರಿಯ ಕಲಾವಿದರಿಂದ ತೊಡಗಿ ಸಮಾಜದಲ್ಲಿ ಜಾತಿ ಭೇದವಿಲ್ಲದೆ ಹಿರಿಯರೂ ಕಿರಿಯರೂ ನನ್ನ ಅನಿಸಿಕೆಗೆ ಪೂರಕವಾಗಿಯೇ ಸ್ಪಂದಿಸಿದ್ದಾರೆ. ಅದೇ ಕಾರಣವೋ ಎಂಬಂತೆ, ಅದೇ ಕಲಾವಿದರಿಂದ ಅದೇ ಪ್ರಸಂಗ ಹೇಸಿಗೆಯ ಹಾಸ್ಯಕ್ಕೆಲ್ಲ ಕತ್ತರಿ ಪ್ರಯೋಗವಾಗಿ ಬಹಳ ಯಶಸ್ವಿಯಾಗಿ ಮಂಗಳೂರಿನಲ್ಲಿ ಪ್ರದರ್ಶನಗೊಂಡಿತು. ಕಲಾವಿದರು ವೇದಿಕೆಯಲ್ಲಿ ನನ್ನ ಅನಿಸಿಕೆಗೆ ಅಸಹನೆ ವ್ಯಕ್ತಪಡಿಸಿದ್ದಕ್ಕೆ ಬೇಸರವಿಲ್ಲ. ರಂಗ ಶುಚಿಯಾಯಿತಲ್ಲ.

ಸಾ೦ಧರ್ಭಿಕ ಚಿತ್ರ
ಸಿದ್ಧಕಟ್ಟೆಯವರು ರಂಗದ ಹಿರಿಯ ಕಲಾವಿದರು ಮಾತ್ರವಲ್ಲ, ಪುರಾಣದ ಬಗ್ಗೆ ಆಳವಾದ ಮಾಹಿತಿ ಉಳ್ಳವರು. ಅವರ ಅನಿಸಿಕೆಗೆ ನನ್ನದೂ ಸಹಮತವೇ. ಕಥೆಗೆ ಪೂರಕವಾಗಿ ಹಾಸ್ಯ ಬೇಕು ಎಂದಿದ್ದೀರಿ. ಆದರೆ ಮೇಲೆ ತಿಳಿಸಿದ ಅಷ್ಟೂ ಹಾಸ್ಯ ಆ ಕಥೆಗೆ ಯಾವ ರೀತಿ ಪೂರಕ ಎಂಬುದು ನನಗೆ ಈವರೆಗೆ ತಿಳಿಯದು. ತಾವು ಹೇಳಿದಂತೆ ಹಾಸ್ಯ ಪ್ರೇಕ್ಷಕನಿಗೆ ತಾತ್ಕಾಲಿಕ ಮಾನಸಿಕ ವಿಚ್ಛೇದನ ಕೊಡಬೇಕೇ ಹೊರತು ಪ್ರದರ್ಶನದಿಂದ ಸಂಪೂರ್ಣ ವಿಮುಖರನ್ನಾಗಿಸುವ ಮಟ್ಟಕ್ಕೆ ಬೆಳೆದರೆ ಹೇಗೆ? ಹಾಸ್ಯ ಕಥೆಗೆ ಪೂರಕವಾಗಿ, ಪಾತ್ರೋಚಿತವಾಗಿ ಯಾರ ಭಾವನೆಯ ಮೇಲೂ ದಾಳಿ ಮಾಡದೆ ಪ್ರೇಕ್ಷಕರನ್ನು ರಂಜಿಸಿದರೆ ಅದುವೇ ಅದಕ್ಕೆ ಕುಲ. ಇಲ್ಲವಾದಲ್ಲಿ ಅದು ಕುಲಗೆಟ್ಟಂತೆಯೇ. ಉದಾಹರಣೆಗೆ, ದಿ| ವಿಟ್ಲ ಜೋಶಿಯವರ ಉಸ್ಮಾನ್‌ ಯಾವ ಪಂಗಡವನ್ನೂ ಅವಮಾನಿಸದೆ ಕೇವಲ "ಒಕ್ಕು' ಎಂಬ ಎರಡು ಅಕ್ಷರಗಳಲ್ಲೇ ಪ್ರೇಕ್ಷಕರನ್ನು ರಂಜಿಸಿದಂತೆ. ಲೇಖಕರು ಹೇಳಿದಂತೆ ಹಾಸ್ಯಕ್ಕೆ ಸ್ವಾತಂತ್ರ್ಯ ಬೇಕು. ಆದರೆ, ಸ್ವೇಚ್ಛೆ ಸಲ್ಲ. ಆದರೆ ಮೇಲಿನ ಅಷ್ಟೂ ಹಾಸ್ಯವನ್ನು ಸಮರ್ಥಿಸುವುದಾದರೆ ಹಾಸ್ಯಗಾರನಿಗೆ ಸಂಪೂರ್ಣ ಸ್ವಾತಂತ್ರ್ಯ ಬೇಕು. ಮಾತ್ರವಲ್ಲ ಸ್ವಲ್ಪ ಮಟ್ಟಿನ ಸ್ವೇಚ್ಛೆಯೂ ಆದೀತು ಎಂಬ ವ್ಯಾಖ್ಯಾನವೇ ಸರಿ. ಮಾನ್ಯ ಸಿದ್ಧಕಟ್ಟೆಯವರು ನಾನು ಹೇಳಿದ ಪ್ರದರ್ಶನವನ್ನು ನೋಡಿದ್ದಿದ್ದರೆ ಬಹುಶಃ ಅದನ್ನು ಒಪ್ಪುತ್ತಿರಲಿಲ್ಲ ಎಂಬುದೇ ನನ್ನ ಭಾವನೆ.

ಕಲಾವಿದರು ಕೆಲವು ಬಾರಿ ಚೌಕಟ್ಟು ಮೀರು ವುದು ಸಾಮಾನ್ಯ. ಆದರೆ ರಂಗದಲ್ಲಿರುವ ಹಿರಿಯ ಕಲಾವಿದರು, ಭಾಗವತರು, ಸಹೃದಯ ಪ್ರೇಕ್ಷಕರು ಮತ್ತು ಮಾಧ್ಯಮ ಮಿತ್ರರು ಇಂತಹ ತಪ್ಪುಗಳನ್ನು ತಿದ್ದಿ ಯಕ್ಷಗಾನವನ್ನು ಆದಷ್ಟು ಚೊಕ್ಕವಾಗಿ ಉಳಿಸಿಕೊಳ್ಳುವ ಹೊಣೆಗಾರಿಕೆಯನ್ನು ಹೊರಬೇಕು. ಈ ನಿಟ್ಟಿನಲ್ಲಿ ಕಲಾವಿದರೂ ಅನಿಸಿಕೆಗಳನ್ನು ಧನಾತ್ಮಕವಾಗಿ ಸ್ವೀಕರಿಸಿ ತಪ್ಪಿದ್ದಲ್ಲಿ ಸರಿಪಡಿಸಿ ಸರ್ವರಿಗೂ ಒಪ್ಪಿಗೆ ಯಾಗುವ ಕಲಾವಿದರಾಗಿ ಬೆಳೆದರೆ ತಮಗೂ, ರಂಗಕ್ಕೂ ಹಿತ. ಇಲ್ಲವಾದಲ್ಲಿ ಕಲಾಭಿಮಾನಿಗಳು ಪ್ರೇಕ್ಷಕ ಪ್ರಭುಗಳು ಇತ್ಯಾದಿ ಪದಬಳಕೆ ಎಷ್ಟು ಸಮಂಜಸ?



ಕೃಪೆ : http://www.udayavani.com


Share





ಈ ಲೇಖನಕ್ಕೆ ನಿಮ್ಮ ಪ್ರತಿಕ್ರಿಯೆ       
Your Name : Your Email :
Your Feedback :
 
ಓದುಗರ ಪ್ರತಿಕ್ರಿಯೆಗಳು
ಈ ಲೇಖನಕ್ಕೆ ಪ್ರತಿಕ್ರಿಯಿಸುವಲ್ಲಿ ನೀವು ಮೊದಲಿಗರಾಗಿ




ಪೂರಕ ಲೇಖನಗಳು
 



ತಾಜಾ ಲೇಖನಗಳು
 
ಇದು ಯಕ್ಷಗಾನ ಕಲೆಯ ಸ೦ಪೂರ್ಣ ಮಾಹಿತಿ ಹಾಗೂ ಪ್ರಸರಣಕ್ಕಾಗಿ ಮೀಸಲಿರುವ ಅ೦ತರ್ಜಾಲ ತಾಣ.
ಇದರಲ್ಲಿ ಪ್ರಕಟವಾಗುವ ಕೆಲವು ಲೇಖನಗಳು ಅ೦ತರ್ಜಾಲದಲ್ಲಿರುವ ಮಾಹಿತಿಗಳಿ೦ದ ಕಲೆಹಾಕಲ್ಪಟ್ಟಿದ್ದು, ಯಾವುದೇ ಕು೦ದು ಕೊರತೆಗಳಿದ್ದಲ್ಲಿ ದಯವಿಟ್ಟು ಸ೦ಪರ್ಕಿಸಿ.
ನಮ್ಮ ಬಗ್ಗೆ  |  ಲೇಖಕರ ಬಳಗ  |  ಸ೦ಪರ್ಕಿಸಿ  |  Font Help
 
© ಎಲ್ಲಾ ಹಕ್ಕುಗಳನ್ನು ಕಾಯ್ದಿರಿಸಲಾಗಿದೆ